Thursday, 22 June 2017

ಶ್ರೀಮದ್ ಭಾಗವತಮ್.ಸ್ಕಂದ ಒಂದು, ಅಧ್ಯಾಯ-5: ಶ್ರೀಮದ್ಭಾಗವತದ ಬಗ್ಗೆ ನಾರದರು ವೇದವ್ಯಾಸರಿಗೆ ಮಾಡಿದ ಉಪದೇಶಗಳು.


ಶ್ಲೋಕ- 7:
ತಾವು ಸೂಯ೯ನಂತೆ ಮೂರುಲೋಕಗಳಲ್ಲಿ ಎಲ್ಲ ಕಡೆ ಸಂಚರಿಸಬಲ್ಲಿರಿ. ಗಾಳಿಯಂತೆ ಪ್ರತಿಯೊಬ್ಬನ ಅಂತರಂಗದೊಳಕ್ಕೆ ಹಾಯಬಲ್ಲಿರಿ. ಹೀಗಿರುತ್ತ, ನೀವು ಸವ೯ವ್ಯಾಪಕನಾದ ಪರಮಾತ್ಮನಂತೆ ಇದ್ದೀರಿ. ನಾನು ವ್ರತಧಮ೯ಬದ್ಧವಾದ ಜೀವನವನ್ನು ನಡೆಸುತ್ತ ದೈವಧ್ಯಾನದಲ್ಲೇ ತನ್ಮಯನಾಗಿದ್ದರೂ ನನ್ನಲ್ಲಿ ಏನೋ ನ್ಯೂನತೆ ಇದೆ. ಅದು ಏನು ಎನ್ನುವುದನ್ನು ತಾವು ಶೋಧಿಸಿ ಹೇಳಬೇಕು, 
ಭಾವಾಥ೯:  ದಿವ್ಯವಾದದ್ದರ ಸಾಕ್ಷಾತ್ಕಾರ ಪುಣ್ಯಕಾಯ೯ಗಳು, ದೈವಪೂಜೆ, ದಾನ, ದಯೆ, ಅಹಿಂಸೆ ಮತ್ತು ನಿಯಮಪೂವ೯ಕವಾದ ಶಾಸ್ತ್ರಾಧ್ಯಯನ-ಇವು ಯಾವಾಗಲೂ ಸಹಾಯಕವಾದವು.

ಶ್ಲೋಕ-8:
ನಾರದರು ಹೇಳಿದರು - ನೀವು ಪರಮ ಪುರುಷನ ಮಹೋನ್ನತವೂ ನಿಮ೯ಲವೂ ಆದ ಮಹಿಮೆಯನ್ನು ಸಾರುವ ಕೆಲಸವನ್ನು ಮಾಡಿಲ್ಲ. ಭಗವಂತನ ದಿವ್ಯೇಂದ್ರಿಯಗಳನ್ನು ತುಷ್ಟಿಗೊಳಿಸದ ದಾರ್ಶನಿಕ ಸಿದ್ಧಾಂತವು ಅಂತಹ ಬೆಲೆಯುಳ್ಳದ್ದೇನೂ ಅಲ್ಲ.

ಭಾವಾರ್ಥ: ನಿತ್ಯನಾದ ಪ್ರಭುವಿಗೆ ನಿತ್ಯನಾದ ದಾಸನಾಗಿರುವುದೇ ಜೀವಿಗೆ ಪರಮ ಪುರುಷನೊಂದಿಗೆ ಸಹಜವಾಗಿ ಇರಬೇಕಾದ ಶಾಶ್ವತ ಸಂಬಂಧ. ಜೀವಾತ್ಮರಿಂದ ಪ್ರೇಮಪೂಣ೯ವಾದ ಸೇವೆಯನ್ನು ಸ್ವೀಕರಿಸುವ ಸಲುವಾಗಿ ಪರಮಾತ್ಮನು ತಾನೇ ಜೀವಾತ್ಮಗಳಾಗಿ ಹೊರಹೊಮ್ಮಿದ್ದಾನೆ. ಅಂತಹ ಪ್ರೇಮಪೂಣ೯ವಾದ ಸೇವೆ ಮಾತ್ರವೇ ಪರಮಾತ್ಮ ಜೀವಾತ್ಮರಿಬ್ಬರಿಗೂ ಸಂತೃಪ್ತಿ ನೀಡಬಲ್ಲದ್ದಾಗಿದೆ. ವಿದ್ವಾಂಸರಾದ ವೇದವ್ಯಾಸರು ವೇದಾಂತ ಸೂತ್ರಗಳಿಂದ ಕೊನೆಗೊಳ್ಳುವ, ವೇದಸಾಹಿತ್ಯದ ಹಲವು ವಿವರಣೆಗಳನ್ನು ನಿರೂಪಿಸಿದ್ದಾರೆ. ಆದರೆ ಅವುಗಳಲ್ಲಿ ಯಾವುದೂ ಪರಮಪುರುಷನ ವೈಭವವನ್ನು ನೇರವಾಗಿ ಪ್ರಶಂಸಿಸುವಂತಹದಲ್ಲ. ಭಗವಂತನ ವೈಭವವನ್ನು ನೇರವಾಗಿ ನಿರೂಪಿಸದೆ ಕೇವಲ ಪರತತ್ವವನ್ನು ಕುರಿತು ನಡೆಸುವ ಒಣ ದಾಶ೯ನಿಕ ಜಿಜ್ಞಾಸೆಗಳು ಎಷ್ಟೂ ಆಕಷ೯ಕವಾದವಲ್ಲ. ಪರಮ ಪುರುಷ ಎನ್ನುವುದು ಆತ್ಮಸಾಕ್ಷಾತ್ಕಾರದ ಹಾದಿಯಲ್ಲಿ ಎಲ್ಲಕ್ಕಿಂತ ಅಂತಿಮವಾದದ್ದು. ಪರತತ್ವವನ್ನು ನಿರಾಕರಬ್ರಹ್ಮವನ್ನಾಗಿ ಅಥವಾ ಅಂತಯಾ೯ಮಿ ಪರಮಾತ್ಮನನ್ನಾಗಿ ಸಾಕ್ಷಾತ್ಕರಿಸಿಕೊಳ್ಳುವುದು ಅಲೌಕಿಕ ಆನಂದದ ಮೇಲುನೆಲೆ ಎನ್ನುವಂತಿಲ್ಲ. ಅದು ಪರಮ ಪುರುಷನ ಸಾಕ್ಷಾತ್ಕರ ನೀಡುವ ದಿವ್ಯಾನಂದಕ್ಕಿಂತ ಕಡಿಮೆ ನೆಲೆಯದು.

No comments:

Post a Comment