Tuesday, 6 June 2017

ಶ್ರೀಮದ್ಭಾಗವತಮ್


ಅಧ್ಯಾಯ-೩: ಸಕಲಾವತಾರಗಳಿಗೆ ಆದಿಮೂಲನಾದ ಕೃಷ್ಣ…

ಭೌತಿಕವಾದಿಗಳಲ್ಲಿ ಕಾಮ್ಯಕರ್ಮಿಗಳು ಮತ್ತು ಅನುಭವವಾದಿಗಳು ಎಂಬ ಎರಡು ಬಗೆಯ ಜನಗಳಿದ್ದಾರೆ. ಕಾಮ್ಯಕರ್ಮಿಗಳಿಗಂತೂ ಪರಮ ಸತ್ಯನ ಬಗ್ಗೆ ಎನೂ ತಿಳಿದಿಲ್ಲ. ಕೇವಲ ಊಹಾತ್ಮಕ ಚಿಂತಕರು ಕಾಮ್ಯಕರ್ಮಗಳಲ್ಲಿ ಹತಾಶರಾದ ಮೇಲೆ ಪರಮ ಸತ್ಯನ ಕಡೆಗೆ ತಿರುಗುತ್ತಾರೆ.  ಊಹಾತ್ಮಕ ಚಿಂತನೆಯಿಂದ ಆತನನ್ನು ತಿಳಿಯಲು ಯತ್ನಿಸುತ್ತಾರೆ.  ಮಕ್ಕಳಿಗೆ ಐಂದ್ರಜಾಲಿಕನ ಇಂದ್ರಜಾಲಗಳು ಹೇಗೆ ಕೇವಲ ಕಣ್ಕಟ್ಟುಗಳೋ ಹಾಗೆ ಈ ಎಲ್ಲಾ ವ್ಯಕ್ತಿಗಳಿಗೂ ಪರಮ ಸತ್ಯನು ರಹಸ್ಯಮಯನಾಗಿದ್ದಾನೆ. ಭಗವಂತನ ನಿಗೂಢತೆಯಿಂದ ದಿಕ್ಕುತಪ್ಪುವ ಭಕ್ತರಲ್ಲದವರು ತಾವು ಊಹಾತ್ಮಕ ಚಿಂತನೆ ಮತ್ತು ಕಾಮ್ಯಕರ್ಮಗಳಲ್ಲಿ ಎಷ್ಟೇ ನಿಪುಣರಾಗಿದ್ದರೂ ಯಾವಾಗಲೂ ಅಜ್ಞಾನದಲ್ಲೇ ಇರುತ್ತಾರೆ. ತಮ್ಮ ಸೀಮಿತ ಜ್ಞಾನದಿಂದ ನಿಗೂಢವಾದ ದಿವ್ಯವಲಯವನ್ನು ಭೇದಿಸಲು ಅವರು ಅಸಮರ್ಥರಾಗುತ್ತಾರೆ. ಜಡ ಭೌತವಾದಿಗಳಿಗಿಂತ ಅಥವಾ ಕಾಮ್ಯಕರ್ಮಿಗಳಿಗಿಂತ ಊಹಾತ್ಮಕ ಚಿಂತಕರು ಸ್ವಲ್ಪ ಮೇಲು. ಆದರೆ ಅವರೂ ಕೂಡ ಮಾಯೆಯ ಹಿಡಿತದಲ್ಲಿರುವುದರಿಂದ ರೂಪ, ನಾಮ, ಕ್ರಿಯೆಗಳ ಯಾವುದೇ ಅಂಶವು ಭೌತಿಕ ಶಕ್ತಿಯ ಉತ್ಪಾದನೆಯೆಂದೇ ಅವರು ನಂಬುತ್ತಾರೆ. ಅವರ ದೃಷ್ಟಿಯಲ್ಲಿ ಪರಮ ಚೇತನನು ಆಕಾರ ಹೀನ, ನಾಮ ಹೀನ ಮತ್ತು ಕ್ರಿಯಾ ಹೀನ. ಹೀಗೆ ಊಹಾತ್ಮಕ ಚಿಂತಕರು ‘ಗವಂತನ ದಿವ್ಯ ನಾಮ ಮತ್ತು ರೂಪಗಳನ್ನು ಐಹಿಕ ನಾಮ ರೂಪಗಳಿಗೆ ಸಮಾನವೆಂದು ಭಾವಿಸುವುದರಿಂದ ಅವರು ಅಜ್ಞಾನದಲ್ಲಿದ್ದಾರೆಂದೇ ಹೇಳಬೇಕು. ಭಗವಂತನ ನೈಜಸ್ವರೂಪವನ್ನು ಅವರು ತಮ್ಮ ಸೀಮಿತ ಜ್ಞಾನದಿಂದ ಅರ್ಥಮಾಡಿಕೊಳ್ಳಲು ಸಾಧ್ಯಾವಿಲ್ಲ. ಭಗವದ್ಗೀತೆಯಲ್ಲಿ ಹೇಳಿರುವಂತೆ ಐಹಿಕ ಜಗತ್ತಿನೊಳಗೆ ಇದ್ದಾಗಲೂ ಕೂಡ ಭಗವಂತನು ದಿವ್ಯ ಸ್ಥಿತಿಯಲ್ಲಿರುತ್ತನೆ. ಆದರೆ ಅಜ್ಞಾನಿಗಳು ಜಗತ್ತಿನ ಮಹಾವ್ಯಕ್ತಿತ್ವಗಳಲ್ಲಿ ಭಗವಂತನೂ ಒಬ್ಬ ಎಂದು ಭಾವಿಸುತ್ತಾರೆ. ಮಾಯಾಶಕ್ತಿಯಿಂದ ಅವರು ಹೀಗೆ ದಾರಿತಪ್ಪಿದವರಾಗಿದ್ದಾರೆ. 

ಶ್ರೀಮದ್ಭಾಗವತಮ್ ೧.೩.೩೮: ಯಾರು ನಿಸ್ಸಂಕೋಚದಿಂದ ನಿರಂತರವಾಗಿ ರಥಾಂಗಪಾಣಿಯಾದ ಭಗವಾನ್ ಕೃಷ್ಣನ ಪಾದಕಮಲಗಳಲ್ಲಿ ಹಿತಕರವಾಗಿ ಸೇವೆ ಸಲ್ಲಿಸುತ್ತಾರೋ ಅವರು ಮಾತ್ರ ಬ್ರಹ್ಮಾಂಡದ ಸೃಷ್ಟಿಕರ್ತನನ್ನು ಆತನ ಪೂರ್ಣವೈಭವ, ಶಕ್ತಿ ಮತ್ತು ದಿವ್ಯತೆಯಲ್ಲಿ ಗ್ರಹಿಸಬಲ್ಲರು.

ಭಾವಾರ್ಥ: ಊಹಾತ್ಮಕ ಚಿಂತನೆ ಮತ್ತು ಕಾಮ್ಯಕರ್ಮಗಳ ಕ್ರಿಯೆ ಪ್ರತಿಕ್ರಿಯೆಗಳಿಂದ ಸಂಪೂರ್ಣವಾಗಿ ಮುಕ್ತರಾಗಿರುವುದರಿಂದ ಕೇವಲ ಶುದ್ಧಭಕ್ತರು ಮಾತ್ರ ಭಗವಾನ್ ಕೃಷ್ಣನ ದಿವ್ಯ ನಾಮರೂಪಕ್ರಿಯೆಗಳನ್ನು ಅರಿಯಬಲ್ಲರು. ಭಗವಂತನ ಪರಿಶುದ್ಧ ಭಕ್ತಿಸೇವೆಯಿಂದ ಶುದ್ಧಭಕ್ತರು ವ್ಯಕ್ತಿಗತ ಲಾಭವಾಗಿ ಏನನ್ನೂ ಪಡೆಯಬೇಕಾಗಿರುವುದಿಲ್ಲ. ಅವರು ಯಾವುದೇ ಸಂಕೋಚವಿಲ್ಲದೆ ನಿರಂತರವಾಗಿ ಸ್ವಯಂ ಸ್ಪೂರ್ತಿಯಿಂದ ಭಗವಂತನನ್ನು ಸೇವಿಸುತ್ತಾರೆ. ಭಗವಂತನ ಸೃಷ್ಟಿಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಭಗವಂತನಿಗೆ ಸೇವೆ ಸಲ್ಲಿಸುತ್ತಲೇ ಇರುತ್ತಾನೆ. ಭಗವಂತನ ಈ ನಿಯಮಕ್ಕೆ ಯಾರೂ ಹೊರತಲ್ಲ. ಭಗವಂತನ ಮಾಯಾ ಶಕ್ತಿಯಿಂದ ಒತ್ತಾಯಿಸಲ್ಪಟ್ಟು ಪರೋಕ್ಷವಾಗಿ ಅವನ ಸೇವೆ ಮಾಡುತ್ತಿರುವವರು ಆತನನ್ನು ಪ್ರತಿಕೂಲನೆಲೆಯಲ್ಲಿ ಸೇವಿಸುತ್ತಿದ್ದಾರೆ. ಆದರೆ ಭಗವಂತನ ಪ್ರಿಯ ಪ್ರತಿನಿಧಿಗಳ ನಿರ್ದೇಶನದ ಮೇರೆಗೆ ನೇರವಾಗಿ ಭಗವಂತನಿಗೆ ಸೇವೆ ಸಲ್ಲಿಸುತ್ತಿರುವವರು ಅನುಕೂಲ ನೆಲೆಯಲ್ಲಿ ಅವನನ್ನು ಸೇವಿಸುತ್ತಿದ್ದಾರೆ. ಹಾಗೆ ಭಗವಂತನನ್ನು ಅನುಕೂಲ ನೆಲೆಯಲ್ಲಿ ಸೇವೆ ಮಾಡುವವರೇ ಆತನ ಭಕ್ತರು. ಭಗವತ್ಕೃಪೆ ಮತ್ತು ಭಗವಂತನ ದಯೆಯಿಂದ ಅಂತಹವರು ರಹಸ್ಯಮಯವಾದ ಭಗವಂತನ ದಿವ್ಯಲೋಕವನ್ನು ಪ್ರವೇಶಿಸಬಲ್ಲರು. ಆದರೆ ಊಹಾತ್ಮಕ ಚಿಂತಕರು ಯಾವಾಗಲೂ ಕತ್ತಲೆಯಲ್ಲೇ ಉಳಿಯುತ್ತಾರೆ. ಭಗವದ್ಗೀತೆಯಲ್ಲಿ ಹೇಳಿರುವಂತೆ ಸ್ವಯಂ ಭಗವಂತನೇ ತನ್ನ ಪರಿಶುದ್ಧ ಭಕ್ತರನ್ನು, ಅವರ ಸ್ವಯಂ ಸ್ಪೂರ್ತವಾದ, ನಿರಂತರವಾದ ಪ್ರೀತಿಪೂರ್ಣ ಭಗವತ್ಸೇವೆಯ ಕಾರಣ ಸಾಕ್ಷಾತ್ಕಾರದ ಮಾರ್ಗದತ್ತ ನಡೆಸುತ್ತಾನೆ. ಭಗವದ್ಧಾಮವನ್ನು ಪಡೆಯುವ ರಹಸ್ಯವು ಇದೇ ಆಗಿದೆ. ಕಾಮ್ಯಕರ್ಮವಾಗಲೀ, ಮನೋಕಲ್ಪನೆಗಳಾಗಲೀ ಭಗವಂತನ ದಿವ್ಯಲೋಕಕ್ಕೆ ಪ್ರವೇಶಪಡೆಯಲು ಅರ್ಹತೆಗಳಾಗಿಲ್ಲ.

No comments:

Post a Comment