Wednesday, 8 March 2017

Kannada Nityam Bhagavata Sevaya: ಅಧ್ಯಾಯ-೧: ಋಷಿಗಳ ಪ್ರಶ್ನೆ

ಮುಖ್ಯ ತಂತ್ರಜ್ಞನು ಜಟಿಲವಾದ ಸಂಕೀರ್ಣವಾದ ಕಟ್ಟಡದ ನಿರ್ಮಾಣದಲ್ಲಿ ಸ್ವತಃ ಭಾಗವಹಿಸುವುದಿಲ್ಲ. ಆದರೆ ಕಟ್ಟಡ ನಿರ್ಮಾಣವು ಅವನ ಮಾರ್ಗದರ್ಶನದಲ್ಲೇ ನಡೆಯುವುದರಿಂದ ಅವನಿಗೆ ಕಟ್ಟಡದ ಮೂಲೆ ಸಂದಿಗೊಂದಿಗಳೆಲ್ಲ ಗೊತ್ತು. ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ನಿರ್ಮಾಣದ ಸಕಲ ವಿಷಯಗಳೂ ಗೊತ್ತು. ಅಂತೆಯೇ ಈ ಬ್ರಹ್ಮಾಂಡದ ವಿದ್ಯಮಾನಗಳು ದೇವತೆಗಳಿಂದ ನಿರ್ವಹಿಸಲ್ಪಟ್ಟರೂ ಬ್ರಹ್ಮಾಂಡದ ಸೃಷ್ಟಿಕಾರ್ಯದಲ್ಲಿ ಸರ್ವೋಚ್ಛ ತಂತ್ರಜ್ಞ ಎನ್ನಬಹುದಾದ ದೇವಾಧಿದೇವನಿಗೆ ವಿಶ್ವದ ಪ್ರತಿ ವಿವರವೂ ಗೊತ್ತು. ಅವನು ಈ ಜಗತ್ತಿನ ಮೂಲೆಮೂಲೆಯನ್ನೂ ಬಲ್ಲ. ಈ ಐಹಿಕ ಸೃಷ್ಟಿಯಲ್ಲಿ ಬ್ರಹ್ಮನಿಂದ ಹಿಡಿದು ನಿಕೃಷ್ಟಜೀವಿಯಾದ ಇರುವೆಯವರೆಗೆ ಯಾರೂ ಸ್ವತಂತ್ರರಲ್ಲ. ಎಲ್ಲರಲ್ಲೂ ಎಲ್ಲದರಲ್ಲೂ ಭಗವಂತನ ಕೈವಾಡವನ್ನು ಕಾಣಬಹುದು. ಲೌಕಿಕವಾದ ಎಲ್ಲ ಮೂಲಧಾತುಗಳು ಹಾಗೂ ಆಧ್ಯಾತ್ಮಿಕ ಕಿಡಿ, ಕಿರಣಗಳು ಅವನಿಂದಲೇ ಉದ್ಭೂತವಾಗಿವೆ. ಹಾಗೂ ಈ ಐಹಿಕ ಜಗತ್ತಿನಲ್ಲಿ ಸೃಷ್ಟಿಯಾದದ್ದೆಲ್ಲ ಪರಮಸತ್ಯನೂ ದೇವೋತ್ತಮ ಪರಮ ಪುರುಷನೂ ಆದ ಶ್ರೀ ಕೃಷ್ಣನಿಂದ ಸ್ಪುರಿಸಿದ ಐಹಿಕ ಮತ್ತು ಆಧ್ಯಾತ್ಮಿಕ ಶಕ್ತಿಗಳ ನಡುವಣ ಕ್ರಿಯೆ-ಪ್ರತಿಕ್ರಿಯೆಗಳ ಲವೇ ಆಗಿದೆ. ಒಬ್ಬ ರಸಾಯನ ಶಾಸ್ತ್ರಜ್ಞನು ಪ್ರಯೋಗಾಲಯದಲ್ಲಿ ಜಲಜನಕ ಮತ್ತು ಆಮ್ಲಜನಕದ ಮಿಶ್ರಣದಿಂದ ನೀರನ್ನು ತಯಾರಿಸಬಹುದು. ಆದರೆ ವಾಸ್ತವವಾಗಿ ಅವನು ಆ ದೇವಾಧಿದೇವನ ಪ್ರೇರಣೆಯಿಂದಲೇ ಪ್ರಯೋಗಾಲಯದಲ್ಲಿ ನೀರನ್ನು ತಯಾರಿಸುವ ಕಾರ್ಯದಲ್ಲಿ ತೊಡಗಿರುತ್ತಾನೆ. ಈ ಕಾರ್ಯದಲ್ಲಿ ಅವನು ಬಳಸುವ ವಸ್ತುಗಳನ್ನೂ ಭಗವಂತನೇ ಒದಗಿಸಿದ್ದಾನೆ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಆ ದೇವೋತ್ತಮನಿಗೆ ಸಕಲವೂ ತಿಳಿದಿದೆ. ಎಲ್ಲ ಸೂಕ್ಷ್ಮಾತಿಸೂಕ್ಷ್ಮ ವಿವರಗಳೂ ಅವನ ಅವಗಾಹನೆಗೆ ಬಂದಿವೆ. ಅವನು ಸಂಪೂರ್ಣ ಸ್ವತಂತ್ರನು. ಅವನನ್ನು ಚಿನ್ನದ ಗಣಿಗೆ ಹೋಲಿಸಲಾಗಿದೆ. ಅವನು ಚಿನ್ನದ ಗಣಿಯಾದರೆ ವಿವಿಧ ರೂಪ, ಆಕಾರಗಳಲ್ಲಿರುವ ಜಗತ್ತಿನ ಸೃಷ್ಟಿಗಳೆಲ್ಲ ಚಿನ್ನದಿಂದ ತಯಾರಿಸಲಾದ ಚಿನ್ನದ ಉಂಗುರ, ಚಿನ್ನದ ಕಂಠೀಹಾರ ಮೊದಲಾದವುಗಳಿದ್ದಂತೆ. ಚಿನ್ನದ ಉಂಗುರ, ಚಿನ್ನದ ಕಂಠೀಹಾರಗಳು, ಗುಣಾತ್ಮಕವಾಗಿ ಗಣಿಯಲ್ಲಿರುವ ಚಿನ್ನವೇ. ಆದರೆ ಗಾತ್ರ, ವಿಸ್ತಾರಗಳ ಮೊತ್ತದಲ್ಲಿ ಗಣಿಯ ಚಿನ್ನವು ಭಿನ್ನವಾದದ್ದು. ಆದ್ದರಿಂದ ಪರಮ ಸತ್ಯವು ಏಕಕಾಲದಲ್ಲಿ ಒಂದೇ ಆಗಿದ್ದೂ ಭಿನ್ನವೂ ಆಗಿರುತ್ತದೆ. ಯಾವುದೊಂದೂ ಪರಮಸತ್ಯಕ್ಕೆ ಸಂಪೂರ್ಣವಾಗಿ ಸರಿಸಮವಾಗಲಾರದು. ಅಂತೆಯೇ ಪರಮಸತ್ಯದಿಂದ ಯಾವುದೂ ಸ್ವತಂತ್ರವಲ್ಲ.
        ವಿಶ್ವದ ಸಾಧನಶಿಲ್ಪಿ ಬ್ರಹ್ಮನಿಂದ ಹಿಡಿದು ನಿಕೃಷ್ಟ  ಜೀವಿ ಇರುವೆಯವರೆಗೆ ಎಲ್ಲ ಬದ್ಧಾತ್ಮರೂ ಸೃಜನಶೀಲರು. ಆದರೆ ಇವರಾರೂ ಪರಮ ಪ್ರಭುವಿನಿಂದ ಸ್ವತಂತ್ರರಲ್ಲ. ತಾನು ಹೊರತು ಬೇರೆ ಸೃಷ್ಟಿಕರ್ತನೇ ಇಲ್ಲ ಎಂದು ಐಹಿಕವಾದಿಗಳು ತಪ್ಪಾಗಿ ಭಾವಿಸುತ್ತಾರೆ. ಇದಕ್ಕೆ ಮಾಯೆ ಅಥವಾ ಭ್ರಮೆ ಎಂದು ಕರೆಯಲಾಗುತ್ತದೆ. ಅಲ್ಪ ಜ್ಞಾನಿಗಳಾದ ಕಾರಣ ಐಹಿಕವಾದಿಗಳು ತಮ್ಮ ದೋಷಯುಕ್ತ ಇಂದ್ರಿಯಗಳ ಸಂವೇದನೆಯ ಪರಿಧಿಯಾಚೆಗೆ ನೋಡಲಾರರು. ಹಾಗಾಗಿಯೇ ಅವರು, ಭೌತದ್ರವ್ಯ ಪದಾರ್ಥಗಳು ಮಹಾ ಮೇಧಾವಿಯ ನೆರವಿಲ್ಲದೆ ತಮಗೆ ತಾವೇ ರೂಪುಗೊಳ್ಳುತ್ತವೆ ಎಂದು ಭಾವಿಸುತ್ತಾರೆ. ಈ ವಾದವನ್ನು ಶ್ರೀಲ ವೇದವ್ಯಾಸರು ಹೀಗೆ ಖಂಡಿಸುತ್ತಾರೆ. ‘ಪ್ರತಿಯೊಂದರ ಮೂಲವು ಪರಿಪೂರ್ಣ ಸತ್ಯವೇ ಆಗಿರುವುದರಿಂದ ಯಾವುದೂ ಪರಮಸತ್ಯದ ಒಡಲಿನಿಂದ ಸ್ವತಂತ್ರವಾಗಿರಲಾರದು.‘ ದೇಹಕ್ಕೆ ಏನೇ ಆದರೂ, ತಕ್ಷಣವೇ ದೇಹಧಾರಿಗೆ ಅರಿವಾಗುತ್ತದೆ. ಅಂತೆಯೇ ಸೃಷ್ಟಿಯು ಪರಾತ್ಪರನ ಒಡಲಿದ್ದಂತೆ. ಆದ್ದರಿಂದಲೇ ಪರಾತ್ಪರನು ಸೃಷ್ಟಿಯಲ್ಲಿ ಸಂಭವಿಸುವ ಸಕಲವನ್ನೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬಲ್ಲವನು.

No comments:

Post a Comment