Monday, 6 March 2017

ಶ್ರೀಮದ್ಭಾಗವತಮ್ ೧.೧.೧: ಅಧ್ಯಾಯ -೧ : ಋಷಿಗಳ ಪ್ರಶ್ನೆ

ವಾಸುದೇವ ಅಥವಾ ಭಗವಾನ್ ಶ್ರೀ ಕೃಷ್ಣನು ಸರ್ವಕಾರಣಗಳ ಕಾರಣಕರ್ತ. ಅಸ್ತಿತ್ವದಲ್ಲಿರುವ ಸಕಲವೂ ಅವನಿಂದಲೇ ಉದ್ಗಮವಾದವು. ಇದು ಹೇಗೆ ಎಂಬುದನ್ನು ಮುಂದಿನ ಅಧ್ಯಾಯಗಳಲ್ಲಿ ವಿವರಿಸಲಾಗಿದೆ. ಶ್ರೀಮದ್ಭಾಗವತವನ್ನು ಮಹಾಪ್ರಭು ಶ್ರೀ ಚೈತನ್ಯರು, ದೇವೋತ್ತಮ ಪುರುಷನಾದ ಶ್ರೀ ಕೃಷ್ಣನ ನಿಷ್ಕಳಂಕಪುರಾಣ ಎಂದು ವರ್ಗೀಕರಿಸಿದ್ದಾರೆ. ಏಕೆಂದರೆ ಇದು ಶ್ರೀ ಕೃಷ್ಣನ ದಿವ್ಯ ನಿರೂಪಣೆಯನ್ನು ಹೊಂದಿದೆ. ಶ್ರೀಮದ್ಭಾಗವತದ ಇತಿಹಾಸವೂ ಭವ್ಯವಾದದ್ದು. ಇದನ್ನು ಶ್ರೀ ವೇದವ್ಯಾಸರು ಪಾರಮಾರ್ಥಿಕ ಜ್ಞಾನದಲ್ಲಿ ಪರಿಪಕ್ವತೆಯನ್ನು ಗಳಿಸಿದ ಅನಂತರ ಸಂಕಲಿಸಿದರು. ಅವರು ಇದನ್ನು ತಮ್ಮ ಗುರುಗಳಾದ ಶ್ರೀ ನಾರದರ ಆದೇಶಾನುಸಾರ ರಚಿಸಿದರು. ವೇದವ್ಯಾಸರು, ವೇದಾಂತ ಸೂತ್ರಗಳು ಅಥವಾ ಬ್ರಹ್ಮಸೂತ್ರಗಳು, ಪುರಾಣಗಳು ಮತ್ತು ಮಹಾಭಾರತ ಸೇರಿದಂತೆ ನಾಲ್ಕು ವೇದ ವಿಭಾಗಗಳಿಂದ ಕೂಡಿದ ಸಕಲ ವೇದ ಸಾಹಿತ್ಯವನ್ನು ಸಂಕಲಿಸಿದರು. ಇಷ್ಟಾದರೂ ಅವರಿಗೆ ತೃಪ್ತಿಯಾಗಿರಲಿಲ್ಲ. ಅವರ ಅತೃಪ್ತಿಯನ್ನು ಗಮನಿಸಿದ ಗುರು ನಾರದರು ದೇವೋತ್ತಮ ಪುರುಷ ಶ್ರೀ ಕೃಷ್ಣನ ಪಾರಮಾರ್ಥಿಕ ಚಟುವಟಿಕೆಗಳನ್ನು ಕುರಿತು ಬರೆಯುವಂತೆ ಸಲಹೆಮಾಡಿದರು. ಶ್ರೀ ಕೃಷ್ಣನ ಆ ಪಾರಮಾರ್ಥಿಕ ಚಟುವಟಿಕೆಗಳನ್ನು ಈ ಗ್ರಂಥದ ಹತ್ತನೆಯ ಸ್ಕಂಧದಲ್ಲಿ ಸುಸ್ಪಷ್ಟವಾಗಿ ವಿವರಿಸಲಾಗಿದೆ. ಆದರೆ ಮೂಲ ಸತ್ವ, ಸಾರವನ್ನು ಗ್ರಹಿಸಲು ವಿವಿಧ ಪ್ರಕಾರಗಳ ಜ್ಞಾನಾರ್ಜನೆಯಿಂದ ಕ್ರಮವಾಗಿ ಮುಂದುವರಿಯಬೇಕು.
       ಸೃಷ್ಟಿಯ ಮೂಲವನ್ನು ತಿಳಿಲಿಚ್ಛಿಸುವುದು ತಾತ್ವಿಕ ಮನಸ್ಸಿನ ಸಹಜ ಅಪೇಕ್ಷೆ. ಅಂತಹ ಮನಸ್ಸುಳ್ಳವನು ರಾತ್ರಿ ಆಕಾಶದಲ್ಲಿ ನಕ್ಷತ್ರಗಳನ್ನು ಕಾಣುತ್ತಾನೆ, ಅವುಗಳ ನಿವಾಸಿಗಳನ್ನು ಕುರಿತು ಊಹಿಸುತ್ತಾನೆ. ಇಂತಹಾ ಜಿಜ್ಞಾಸೆಗಳು ಮಾನವ ಸಹಜವಾದದ್ದು. ಏಕೆಂದರೆ ಮಾನವ, ಹುಟ್ಟಿನಿಂದಲೇ ಹೆಚ್ಚು ಬುದ್ಧಿ ಮತ್ತು ಪ್ರಜ್ಞೆಗಳನ್ನು ಬೆಳೆಸಿಕೊಂಡವನು. ಇಂತಹಾ  ಜಿಜ್ಞಾಸೆಗಳಿಗೆಲ್ಲಾ ಶ್ರೀಮದ್ಭಾಗವತದ ಕರ್ತೃ ನೇರ ಉತ್ತರ ನೀಡಿದ್ದಾರೆ. ಸ್ವಾಮಿ ಶ್ರೀ ಕೃಷ್ಣನೇ ಸಕಲ ಸೃಷ್ಟಿಯ ಮೂಲ ಎಂದು ಅವರು ಹೇಳುತ್ತಾರೆ. ಅವನು ಬ್ರಹ್ಮಾಂಡದ ಸೃಷ್ಟಿಕರ್ತೃನೂ ಹೌದು. ಲಯ ಕರ್ತೃನೂ ಹೌದು. ದೈವೇಚ್ಛೆಯಂತೆ ಒಂದು ನಿರ್ದಿಷ್ಟಕಾಲದಲ್ಲಿ ಐಹಿಕ ಪ್ರಪಂಚ ವ್ಯವಸ್ಥೆಯು ಸೃಷ್ಟಿಯಾಗುತ್ತದೆ. ಅದು ಕೆಲಕಾಲ ಪಾಲನೆಗೊಂಡು ಅವನಿಚ್ಛೆಯಂತೆಯೇ ಲಯಗೊಳ್ಳುತ್ತದೆ. ಆದ್ದರಿಂದಲೇ ವಿಶ್ವದ ಸಕಲ ಚಟುವಟಿಕೆಗಳ ಹಿಂದೆ ಆ ಪರಮ ಪುರುಷನ ಇಚ್ಛಾಬಲವಿದೆ. ಸೃಷ್ಟಿಕರ್ತೃನನ್ನು ನಂಬದ ನಾನಾ ಬಗೆಯ ನಾಸ್ತಿಕರಿರುವುದು ನಿಜ. ಈ ನಾಸ್ತಿಕತೆ ಅವರ ಅಜ್ಞಾನದ ಫಲ. ಉದಾಹರಣೆಗೆ ಹೇಳುವುದಾದರೆ ಆಧುನಿಕ ವಿಜ್ಞಾನಿ ಬಾಹ್ಯಾಕಾಶ ಉಪಗ್ರಹಗಳನ್ನು ಸೃಷ್ಟಿಸಿದ್ದಾನೆ. ಹಲವೊಂದು ಏರ್ಪಾಟುಗಳಿಂದ ಅಂತರೀಕ್ಷಕ್ಕೆ ಹಾರಿಸಲಾಗುವ ಈ ಉಪಗ್ರಹಗಳು ಬಹುದೂರದಲ್ಲಿರುವ ವಿಜ್ಞಾನಿಯಿಂದ ನಿಯಂತ್ರಿಸಲ್ಪಡುತ್ತದೆ. ಅಂತೆಯೇ ಅಸಂಖ್ಯಾತ ನಕ್ಷತ್ರಗಳು ಮತ್ತು ಗ್ರಹಗಳಿಂದ ಕೂಡಿದ ಸಕಲ ಬ್ರಹ್ಮಾಡಗಳು ದೇವೋತ್ತಮ ಪರಮಪುರುಷನ ಬುದ್ಧಿಶಕ್ತಿಯಿಂದ ನಿಯಂತ್ರಿತವಾಗಿವೆ.
        ಪರಮ ಸತ್ಯ ಅಥವಾ ದೇವೋತ್ತಮ ಪುರುಷನೇ ಸಕಲ ವ್ಯಕ್ತಿಗಳಲ್ಲಿ ಪ್ರಧಾನನೆಂದು ವೇದಸಾಹಿತ್ಯಗಳಲ್ಲಿ ಹೇಳಿದೆ. ಪ್ರಥಮ ಸೃಷ್ಟಿಯಾದ ಬ್ರಹ್ಮನಿಂದ ಹಿಡಿದು ಒಂದು ಸಣ್ಣ ಇರುವೆಯವರೆಗೆ ಎಲ್ಲವೂ ಪ್ರತ್ಯೇಕ ಜೀವಿಗಳು. ಬ್ರಹ್ಮನಿಂದ ಮೇಲಕ್ಕೂ ಪ್ರತ್ಯೇಕ ಸಾಮರ್ಥ್ಯಗಳಿರುವ ಇತರ ಜೀವಿಗಳಿದ್ದಾರೆ. ಅಂತೆಯೇ ದೇವೋತ್ತಮ ಪುರುಷನೂ ಒಬ್ಬ ಪುರುಷ. ಇತರ ಜೀವಿಗಳಂತೆಯೇ ಅವನೂ ಒಬ್ಬ ಪ್ರತ್ಯೇಕ ಪುರುಷ. ಆದರೆ ಅವನು ಪರಮ ಪ್ರಭು ಅಥವಾ ಪರಮಪುರುಷ. ಅವನು ಪರಮ ಮೇಧಾವಿಯಾಗಿದ್ದು ಹಲವು ಬಗೆಯ ಲೋಕೋತ್ತರವಾದ ಕಲ್ಪನಾತೀತ ಶಕ್ತಿಗಳನ್ನು ಹೊಂದಿದ್ದಾನೆ. ಮಾನವನು ತನ್ನ ಬುದ್ಧಿಶಕ್ತಿಯಿಂದ ಬಾಹ್ಯಾಕಾಶದಲ್ಲಿ ಚಲಿಸುವ ಕೃತಕ ಉಪಗ್ರಹಗಳನ್ನು ಸೃಷ್ಟಿಸಬಹುದಾದರೆ ಮಾನವನಿಗೆ ಮಿಗಿಲಾದ ಪ್ರಚಂಡ ಬುದ್ಧಿಶಕ್ತಿಯು ಇನ್ನೂ ಅದ್ಭುತವಾದ ವಸ್ತುಗಳನ್ನು ಸೃಷ್ಟಿಸಬಲ್ಲದು ಎಂಬುದನ್ನು ಸುಲಭವಾಗಿ ಊಹಿಸಬಹುದು. ವಿವೇಕಶಾಲಿಗಳು ಈ ತರ್ಕವನ್ನು ಸುಲಭವಾಗಿ ಒಪ್ಪಿಕೊಳ್ಳುವರು. ಆದರೆ ಇದನ್ನು ಎಂದೂ ಒಪ್ಪದ ಹಠಮಾರಿ ನಾಸ್ತಿಕರಿದ್ದಾರೆ.                                                                 

No comments:

Post a Comment