Monday, 6 March 2017

ಶ್ರೀಮದ್ಭಾಗವತಮ್


ಅಧ್ಯಾಯ-೩: ಸಕಲಾವತಾರಗಳಿಗೆ ಆದಿಮೂಲನಾದ ಕೃಷ್ಣ…

ಶ್ರೀಮದ್ಭಾಗವತಮ್ ೧.೩.೧೪: ಹೇ ಬ್ರಾಹ್ಮಣರೇ, ಋಷಿಗಳ ಪ್ರಾರ್ಥನೆಯ ಮೇರೆಗೆ ಭಗವಂತನು ತನ್ನ ಒಂಬತ್ತನೆಯ ಅವತಾರದಲ್ಲಿ (ಪೃಥು) ರಾಜನಾಗಿ ಜನಿಸಿದನು. ಪೃಥುವು ಭೂಮಿಯನ್ನು ನಾನಾ ರೀತಿಯ ಬೆಳೆಗಳಿಗಾಗಿ ಸಾಗುವಳಿ ಮಾಡಿದನು. ಆ ಕಾರಣದಿಂದ ಪೃಥ್ವಿಯು ಸುಂದರವೂ, ಆಕರ್ಷಕವೂ ಆಯಿತು.

ಭಾವಾರ್ಥ: ಪೃಥು ರಾಜನು ಅವತರಿಸುವ ಮೊದಲು ಅವನ ತಂದೆಯ ಅನೈತಿಕ ಜೀವನದ ದೆಸೆಯಿಂದ ರಾಜ್ಯಾಡಳಿತದಲ್ಲಿ ಭಾರೀ ಅವ್ಯವಸ್ಥೆಯುಂಟಾಗಿತ್ತು. ಆಗ ಬ್ರಾಹ್ಮಣರು ಮತ್ತು ಋಷಿಗಳು ಭಗವಂತನ ಅವತಾರಕ್ಕಾಗಿ ಪ್ರಾರ್ಥಿಸಿದ್ದೇ ಅಲ್ಲದೆ, ಆಡಳಿತ ನಡೆಸುತ್ತಿದ್ದ ರಾಜನನ್ನು ಸಿಂಹಾಸನದಿಂದ ಕಿತ್ತುಹಾಕಿದರು. ರಾಜನಾದವನು ಧರ್ಮಾತ್ಮನಾಗಿರಬೇಕು; ತನ್ನ ಪ್ರಜೆಗಳ ಸರ್ವಾಂಗೀಣ ಪ್ರಗತಿಯನ್ನೇ ಸದಾ ಲಕ್ಷ್ಯದಲ್ಲಿ ಇಟ್ಟುಕೊಂಡಿರಬೇಕು. ಇದೇ ರಾಜನ ಕರ್ತವ್ಯ. ಈ ಕರ್ತವ್ಯ ನಿರ್ವಹಣೆಯಲ್ಲಿ ರಾಜನು ಎಲ್ಲಾದರೂ ಸ್ವಲ್ಪಮಟ್ಟಿನ ಉದಾಸೀನತೆ ತೋರಿಸಿದರೆ, ಬ್ರಾಹ್ಮಣರು ರಾಜನನ್ನು ಸಿಂಹಾಸನದಿಂದ ಕೆಳಗಿಳಿಸಬೇಕು. ಆದರೆ ಬ್ರಾಹ್ಮಣರು ತಾವೇ ಸಿಂಹಾಸನವನ್ನು ಆಕ್ರಮಿಸುವುದಿಲ್ಲ. ಜನತೆಯ ಒಳಿತಿಗಾಗಿ ಅವರು ನಿರ್ವಹಿಸಬೇಕಾದ ಇನ್ನೂ ಮುಖ್ಯವಾದ ಕರ್ತವ್ಯಗಳಿರುತ್ತವೆ ಎಂಬುದೇ ಅದಕ್ಕೆ ಕಾರಣ. ಆದುದರಿಂದಲೇ ರಾಜಸಿಂಹಾಸನವನ್ನು ಆಕ್ರಮಿಸಿಕೊಳ್ಳುವ ಬದಲು ಅವರು ಭಗವಂತನನ್ನು ಅವತರಿಸಲು ಪ್ರಾರ್ಥಿಸಿದರು. ಭಗಂತನು ಅವರ ಪ್ರಾರ್ಥನೆಯನ್ನು ಮನ್ನಿಸಿ, ಮಹಾರಾಜ ಪೃಥುವಾಗಿ ಜನಿಸಿದನು. ನಿಜವಾದ ಬುದ್ಧಿಜೀವಿಗಳು ಅಥವಾ ಯೋಗ್ಯರಾದ ಬ್ರಾಹ್ಮಣರು ರಾಜಕೀಯ ಅಧಿಕಾರಸ್ಥಾನಗಳಿಗಾಗಿ ಯಾವಾಗಲೂ ಆಸೆಪಡುವುದಿಲ್ಲ. ಮಹಾರಾಜ ಪೃಥುವು ಭೂಮಿಯಿಂದ ಅನೇಕ ಬಗೆಯ ಬೆಳೆಗಳನ್ನು ಬೆಳೆದನು. ಇಂತಹ ಒಳ್ಳೆಯ ದೊರೆಯನ್ನು ಪಡೆದುದಕ್ಕಾಗಿ ಪ್ರಜೆಗಳಿಗೂ ಸಂತೋಷವಾಯಿತು. ಜೊತೆಗೆ ಪೃಥುವಿನ ಕೃಷಿಕರ್ಮದಿಂದ ಭೂಮಿಯ ನೋಟ ಸುಂದರವೂ, ಆಕರ್ಷಕವೂ ಆಯಿತು.

ಶ್ರೀಮದ್ಭಾಗವತಮ್ ೧.೩.೧೫: ‘ಚಾಕ್ಷುಷ‘ ಮನುವಿನ ಯುಗದ ಅನಂತರ ಉಂಟಾದ ಮಹಾಜಳಪ್ರಳಯದಲ್ಲಿ, ಇಡೀ ವಿಶ್ವವೇ ನೀರಿನ ಆಳದಲ್ಲಿ ಮುಳುಗಿ ಹೋಯಿತು. ಆಗ ಭಗವಂತನು ಮತ್ಸ್ಯಾವತಾರವನ್ನು ತಾಳಿ ತೆಪ್ಪವೊಂದರಿಂದ ವೈವಸ್ವತಮನುವನ್ನು ರಕ್ಷಿಸಿದನು.

ಭಾವಾರ್ಥ: ಭಾಗವತದ ಆದ್ಯಟೀಕಾಚಾರ್ಯರಾದ ಶ್ರೀಪಾದ ಶ್ರೀಧರಸ್ವಾಮಿಗಳ ಪ್ರಕಾರ, ಪ್ರತಿಯೊಬ್ಬ ಮನುವಿನ ಅನಂತರವೂ ಪ್ರಳಯವೇನೂ ಉಂಟಾಗುವುದಿಲ್ಲ. ಚಾಕ್ಷುಷ ಮನುವಿನ ಯುಗಾಂತ್ಯದಲ್ಲಿ ಜಲಪ್ರಳಯವಾಗಲು ಸತ್ಯವ್ರತನಿಗೆ ಕೆಲವು ವಿಸ್ಮಯಗಳನ್ನು ತೋರಿಸುವುದೇ ಕಾರಣವಾಗಿತ್ತು. ಆದರೆ ಶ್ರೀಲ ಜೀವಗೋಸ್ವಾಮಿಯವರು ಅಧಿಕೃತ ಶಾಸ್ತ್ರಗ್ರಂಥಗಳಿಂದ (ವಿಷ್ಣು ಧರ್ಮೋತ್ತರಪುರಾಣ, ಮಾರ್ಕಂಡೇಯ ಪುರಾಣ, ಹರಿವಂಶ ಮೊದಲಾದ ಕೃತಿಗಳಿಂದ) ಖಚಿತ ಆಧಾರಗಳನ್ನು ಕೊಟ್ಟು, ಪ್ರತಿಯೊಬ್ಬ ಮನುವಿನ ಕಾಲಾವಧಿಯ ಅನಂತರವೂ ಪ್ರಳಯವುಂಟಾಗುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಶ್ರೀಲ ಜೀವ ಗೋಸ್ವಾಮಿಯವರ ವಿಚಾರವನ್ನು ಶ್ರೀಲ ವಿಶ್ವನಾಥ ಚಕ್ರವರ್ತಿಯವರು ಕೂಡ ಸಮರ್ಥಿಸುತ್ತಾರೆ. ಪ್ರತಿ ಮನುವಿನ ಅನಂತರ ಪ್ರಳಯವಾಗುವುದು ಎಂಬುದಕ್ಕೆ ಭಾಗವತಾಮೃತದಿಂದ ಆಧಾರವನ್ನು ಕೊಡುತ್ತಾರೆ. ಇಷ್ಟೇ ಅಲ್ಲದೆ ತನ್ನ ಭಕ್ತನಾದ ಸತ್ಯವ್ರತನಿಗೆ ಭಗವಂತನು ವಿಶೇಷವಾದ ಕೃಪೆಯನ್ನು ತೋರಿಸುವುದಕ್ಕಾಗಿ ಈ ಒಂದು ನಿರ್ದಿಷ್ಟಯುಗದಲ್ಲಿ ಅವತರಿಸಿದನು.

-- -- -- -- -- -- -- -- -- -- -- -- -- -- -- -- -- -- -- -- -- -- --

No comments:

Post a Comment