Saturday, 4 March 2017

ಶ್ರೀಮದ್ಭಾಗವತಮ್ ೧.೧.೧: ಅಧ್ಯಾಯ -೧ : ಋಷಿಗಳ ಪ್ರಶ್ನೆ

  ಎಲೈ,  ಸ್ವಾಮಿಯೇ,  ವಸುದೇವಪುತ್ರನಾದ ಶ್ರಿಕೃಷ್ಣನೇ,  ಸರ್ವವ್ಯಾಪಿಯಾದ ದೇವೋತ್ತಮ ಪುರುಷನೇ, ನಿನಗೆ ಭಕ್ತಿಪೂರ್ವಕವಾಗಿ ನಮಿಸುತ್ತೇನೆ. ದೇವೋತ್ತಮನಾದ ಶ್ರೀಕೃಷ್ಣನೇ ಪರಮ ಸತ್ಯ. ದೃಷ್ಠಿಗೋಚರವಾದ ಸಮಸ್ತ ಲೋಕಗಳ ಸೃಷ್ಠಿ,  ಸ್ಥಿತಿ,  ಲಯಗಳಿಗೆ ಆದ್ಯಕಾರಣನಾದ ಶ್ರೀಕೃಷ್ಣನು ಕಾರಣಪುರುಷನಾದ್ದರಿಂದ ನಾನು ಅವನ ಧ್ಯಾನ ಮಾಡುತ್ತೇನೆ. ಅವನು ನೇರವಾಗಿ ಮತ್ತು ಪರೋಕ್ಷವಾಗಿ ಸಮಸ್ತ ಪ್ರಜ್ಞೆಯನ್ನು ಉಳ್ಳವನು. ಅವನಿಗೆ ಮಿಗಿಲಾದ ಕಾರ್ಯಕಾರಣ ಇನ್ನೊಂದಿಲ್ಲವಾದ್ದರಿಂದ ಅವನು ಸರ್ವತಂತ್ರ ಸ್ವತಂತ್ರನು. ಶ್ರೀಕೃಷ್ಣನೇ ಮೊದಲು ಮೂಲ ಜೀವಿಯಾದ ಬ್ರಹ್ಮನಿಗೆ ಹೃದಯದ ಮೂಲಕ ವೇದ ಜ್ಞಾನವನ್ನು ಬೋಧಿಸಿದನು. ಅಗ್ನಿಯಲ್ಲಿ ಜಲ, ಜಲದಲ್ಲಿ ನೆಲದಂತಹಾ ಮಾಯಾಬಿಂಬಗಳಿಂದ ದಿಗ್ಭಾಂತರಾದ ಋಷಿವರೇಣ್ಯರು ಮತ್ತು ದೇವತೆಗಳು ಅವನ ಭ್ರಮೆಗೆ ಒಳಪಟ್ಟರು. ಅವನಿಂದಾಗಿಯೇ, ಪಕೃತಿಯ ಮೂರುಗುಣಗಳಿಗೆ ಪ್ರತಿಕ್ರಿಯೆಯಾಗಿ, ತಾತ್ಕಾಲಿಕವಾಗಿ ರೂಪುಗೊಂಡ ಐಹಿಕ ಜಗತ್ತು ಅವಾಸ್ತವವಾದರೂ ವಾಸ್ತವ ಎಂಬಂತೆ ಕಾಣುತ್ತದೆ. ಎಂದೇ ಐಹಿಕ ಜಗತ್ತು ಮಾಯಾಬಿಂಬಗಳಿಂದ ಸರ್ವದಾ ಮುಕ್ತವಾದಾಗ, ತನ್ನ ಪಾರಮಾರ್ಥಿಕ ದಿವ್ಯಧಾಮದಲ್ಲಿ ನಿತ್ಯನಿರಂತರವಾಗಿರುವ ಶ್ರೀ ಕೃಷ್ಣನನ್ನು ಧ್ಯಾನಿಸುತ್ತೇನೆ. ಏಕೆಂದರೆ ಅವನೇ ಪರಮಸತ್ಯ.

ಭಾವಾರ್ಥ :
       ದೇವೋತ್ತಮ ಪರಮ ಪುರುಷನಾದ ವಾಸುದೇವನ ಪ್ರಸ್ತಾಪವು, ವಸುದೇವ ದೇವಕಿಯರ ದೈವೀಪುತ್ರನಾದ ಸ್ವಾಮಿ ಶ್ರೀ ಕೃಷ್ಣನನ್ನೇ ನೇರವಾಗಿ ಸೂಚಿಸುತ್ತದೆ. ಈ ಸಂಗತಿಯನ್ನು ಈ ಕೃತಿಯಲ್ಲಿ ಹೆಚ್ಚು ಸ್ಪಷ್ಟವಾಗಿ ವಿವರಿಸಲಾಗಿದೆ. ಶ್ರೀ ಕೃಷ್ಣನು ಮೂಲ ದೇವೋತ್ತಮ ಪುರುಷ , ಮತ್ತು ಉಳಿದೆಲ್ಲವರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಆ ಪರಮ ಪುರುಷನ ಅಂಶಜರು ಎಂದು ವೇದವ್ಯಾಸರು ದೃಢವಾಗಿ ಹೇಳುತ್ತಾರೆ. ಶ್ರೀಲ ಜೀವಗೋಸ್ವಾಮಿಯವರು ತಮ್ಮ ಕೃಷ್ಣ ಸಂದರ್ಭ ಗ್ರಂಥದಲ್ಲಿ ಇನ್ನಷ್ಟು ಸ್ಪಷ್ಟವಾಗಿ ವಿವರಿಸಿದ್ದಾರೆ. ಮೂಲ ಜೀವಿಯಾದ ಬ್ರಹ್ಮದೇವರು ತಮ್ಮ ಬ್ರಹ್ಮಸಂಹಿತೆ ಗ್ರಂಥದಲ್ಲಿ ಶ್ರೀ ಕೃಷ್ಣನ ವಿಷಯವನ್ನು ಹೆಚ್ಚು ಸಾರವತ್ತಾಗಿ, ಧಾರಾಳವಾಗಿ ವಿವರಿಸಿದ್ದಾರೆ. ಸಾಮವೇದ ಉಪನಿಷತ್ತಿನಲ್ಲಿ ಶ್ರೀ ಕೃಷ್ಣನು ದೇವಕಿಯ ದೈವೀಪುತ್ರನೆಂದು ಕೂಡಾ ಹೇಳಲಾಗಿದೆ. ಆದ್ದರಿಂದ ಈ ಸ್ತ್ರೋತ್ರದಲ್ಲಿ ಪ್ರಥಮ ಪ್ರಸ್ತಾಪದಲ್ಲೆ ಶ್ರೀ ಕೃಷ್ಣನನ್ನು ಆದ್ಯದೈವ ಎಂದು ಕಂಠೋಕ್ತವಾಗಿ ಹೇಳಲಾಗಿದೆ. ಬೇರಾವುದೇ ಪಾರಮಾರ್ಥಿಕ ನಾಮನಿರ್ದೇಶನದಿಂದ ಪರಮ ಪುರುಷನಾದ ಈ ದೇವೋತ್ತಮನನ್ನು ಅರಿತುಕೊಳ್ಳುವುದಾದಲ್ಲಿ ಅದು ಸರ್ವಾಕರ್ಷಕ ಎಂಬ ಅರ್ಥದ ಪದವನ್ನು ಸೂಚಿಸುವ ನಾಮವಾಗಿರಬೇಕು. ಭಗವದ್ಗೀತೆಯಲ್ಲಿ ಅನೇಕ ಸಂದ‘ರ್ಗಳಲ್ಲಿ ಶ್ರೀ ಕೃಷ್ಣನು ತಾನು ಮೂಲತಃ ದೇವಾಧಿದೇವ ಪರಮ ಪುರುಷನೆಂದು ಆತ್ಮ ಪ್ರತಿಷ್ಠಾಪನಾರ್ಥದಲ್ಲಿ ಹೇಳಿದ್ದಾನೆ. ಇದನ್ನು ಆರ್ಜುನ ಹಾಗೂ ಋಷಿವರೇಣ್ಯರಾದ ನಾರದರು, ವಾಸರು ಮೊದಲಾದವರು ದೃಢಪಡಿಸಿದ್ದಾರೆ. ಪದ್ಮಪುರಾಣದಲ್ಲಿ ದೇವರ ಅಸಂಖ್ಯಾತ ನಾಮಗಳಲ್ಲಿ ಕೃಷ್ಣನಾಮವು ಪ್ರಮುಖವಾದುದೆಂದು ಹೇಳಲಾಗಿದೆ. ಅದು ವಾಸುದೇವ ದೇವೋತ್ತಮ ಪುರುಷನ ಸಮಗ್ರ ಅಂಶವನ್ನು ಸೂಚಿಸುತ್ತದೆ. ಭಗವಂತನ ಸಕಲ ರೂಪಗಳೂ ಕೇವಲ ವಾಸುದೇವನೇ ಆಗಿದ್ದಾನೆ ಎಂದು ಈ ಶ್ಲೋಕದಲ್ಲಿ ಸೂಚಿಸಲಾಗಿದೆ. ವಾಸುದೇವ ಎಂಬ ಹೆಸರು ನಿರ್ದಿಷ್ಟವಾಗಿ ವಸುದೇವ ದೇವಕಿಯರ ದೈವೀಪುತ್ರನನ್ನೇ ಸೂಚಿಸುತ್ತದೆ. ಸಂನ್ಯಾಸದಲ್ಲಿ ಪರಿಪೂರ್ಣತೆಯನ್ನು ಸಾಧಿಸಿದ ಪರಮಹಂಸರು ಶ್ರೀ ಕೃಷ್ಣನನ್ನು ಸದಾ ಧ್ಯಾನಿಸುತ್ತಾರೆ.

No comments:

Post a Comment