Monday, 13 March 2017

ಶ್ರೀಮದ್ಭಾಗವತಮ್


ಅಧ್ಯಾಯ-೧: ಋಷಿಗಳ ಪ್ರಶ್ನೆ …
ಶ್ರೀಮದ್ಭಾಗವತಮ್ ೧.೧.೧೩: ಎಲೈ ಸೂತಮುನಿಗಳೇ, ದೇವೋತ್ತಮ ಪುರುಷನನ್ನೂ ಹಾಗೂ ಅವನ ಅವತಾರಗಳನ್ನೂ ತಿಳಿಯಲು ನಾವು ಕಾತರರಾಗಿದ್ದೇವೆ. ಪೂರ್ವಾಚಾರ್ಯರ ಆ ಉಪದೇಶಗಳನ್ನು ನಮಗೆ ವಿವರಿಸಿ. ಆ ಉಪದೇಶಗಳ ವಾಚನದಿಂದ ಹಾಗೂ ಶ್ರವಣದಿಂದ ಪ್ರತಿಯೊಬ್ಬರೂ ಉದ್ಧಾರವಾಗುವರು.
ಭಾವಾರ್ಥ: ಪರಮಸತ್ಯದ ಪಾರಮಾರ್ಥಿಕ ಸಂದೇಶವನ್ನು ಶ್ರವಣ ಮಾಡಲು ಇಲ್ಲಿ ಕೆಲವೊಂದು ನಿಬಂಧನೆಗಳನ್ನು ವಿಧಿಸಲಾಗಿದೆ. ಮೊದಲ ನಿಬಂಧನೆಯೆಂದರೆ, ಪ್ರೇಕ್ಷಕರು ಶ್ರವಣ ಮಾಡಲು ಕಾತರರಾಗಿರಬೇಕು ಮತ್ತು ಅಂತಹ ಪ್ರಾಮಾಣಿಕ ಇಚ್ಛೆಯನ್ನು ಹೊಂದಿರಬೇಕು. ಅಲ್ಲದೆ, ಪ್ರವಚನಕಾರರು ಅಂಗೀಕೃತ ಆಚಾರ್ಯ ಶ್ರೇಣಿಯ ಗುರುಪರಂಪರೆಯಿಂದ ಬಂದವರಾಗಿರಬೇಕು. ಲೌಕಿಕದಲ್ಲಿ ಮಗ್ನರಾದವರಿಗೆ ಪರಮ ಸತ್ಯದ ಸಂದೇಶ ಅರ್ಥವಾಗುವುದಿಲ್ಲ. ಯಾರೇ ಆಗಲಿ, ಸದ್ಗುರುವಿನ ಮಾರ್ಗದರ್ಶನದಿಂದ ಕ್ರಮೇಣ ಪರಿಶುದ್ಧರಾಗುವರು. ಆದ್ದರಿಂದ ಯಾರೇ ಆಗಲಿ, ಗುರುಪರಂಪರೆಯ ಉತ್ತರಾಧಿಕಾರಿಯಾಗಬೇಕು. ಶರಣಾಗತ ಶ್ರವಣದ ಆಧ್ಯಾತ್ಮಿಕ ಕಲೆಯನ್ನು ಅರಿತುಕೊಳ್ಳಬೇಕು. ಶ್ರೀಲ ಸೂತಮುನಿಗಳು ಶ್ರೀ ವ್ಯಾಸದೇವರ ಪರಂಪರೆಗೆ ಸೇರಿದವರು. ಇನ್ನು, ನೈಮಿಷಾರಣ್ಯದ ಋಷಿಗಳಾದರೋ ಸತ್ಯಾಕಾಂಕ್ಷಿಗಳೂ ಆದ ಪ್ರಾಮಾಣಿಕರು. ಆದ್ದರಿಂದಲೇ ಶ್ರೀಲ ಸೂತಮುನಿಗಳು ಮತ್ತು ನೈಮಿಷಾರಣ್ಯದ ಋಷಿಗಳ ವಿಷಯದಲ್ಲಿ ಈ ಎಲ್ಲ ನಿಯಮಗಳೂ ಈಡೇರುತ್ತವೆ. ಶ್ರೀಕೃಷ್ಣನ ಅತಿಮಾನುಷ ಚಟುವಟಿಕೆಗಳು ಅವನ ಅವತಾರ, ಅವನ ಜನನ, ಅವನ ಸಾಕ್ಷಾತ್ಕಾರ, ಅಂತರ್ಧಾನಗಳು, ಅವನ ರೂಪಗಳು, ಹೆಸರುಗಳ ಇವೆಲ್ಲಕ್ಕೂ ಸಂಬಂಧಿಸಿದ ಪಾರಮಾರ್ಥಿಕ ಪ್ರಕರಣಗಳು ಸುಲಭ ಗ್ರಾಹ್ಯವಾಗಿವೆ. ಏಕೆಂದರೆ, ಇಲ್ಲಿ ಎಲ್ಲವೂ ಎಲ್ಲ ನಿಯಮಗಳಿಗೆ ಅನುಗುಣವಾಗಿವೆ. ಇಂತಹಾ ಪ್ರವಚನಗಳು ಆಧ್ಯಾತ್ಮಿಕ ಸಾಕ್ಷಾತ್ಕಾರದ ಪಥದಲ್ಲಿರುವ ಸಕಲ ಮಾನವರಿಗೂ ಸಹಾಯಕವಾಗುತ್ತವೆ.

ಶ್ರೀಮದ್ಭಾಗವತಮ್ ೧.೧.೧೪: ಸಾಕ್ಷಾತ್ ಭಯಮೂರ್ತಿಯೇ ಶ್ರೀಕೃಷ್ಣನಿಗೆ ಅಂಜುತ್ತದೆ. ಜನನ ಮರಣದ ಜಟಿಲ ಚಕ್ರದಲ್ಲಿ ಸಿಲುಕಿ ಬಿದ್ದ ಜೀವಿಗಳು ಅಪ್ರಜ್ಞಾಪೂರ್ವಕವಾಗಿಯಾದರೂ ಶ್ರೀಕೃಷ್ಣನ ನಾಮವನ್ನು ಸಂಕೀರ್ತನೆ ಮಾಡಿದರೆ ಕೂಡಲೇ ಮುಕ್ತಿಹೊಂದುತ್ತಾರೆ.
ಭಾವಾರ್ಥ: ವಾಸುದೇವ ಅಥವಾ ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನು ಸಕಲ ಚರಾಚರಗಳ ಪರಮ ನಿಯಾಮಕನಾಗಿದ್ದಾನೆ. ಸರ್ವಶಕ್ತನ ರೋಷಾವೇಶಕ್ಕೆ ಹೆದರದವರು ಈ ಸೃಷ್ಟಿಯಲ್ಲಿ ಯಾರೂ ಇಲ್ಲ. ರಾವಣ, ಹಿರಣ್ಯಕಷಿಪು, ಕಂಸ ಮೊದಲಾದ ಶಕ್ತಿಶಾಲಿ ಅಸುರರು ದೇವೋತ್ತಮ ಪರಮ ಪುರುಷನಿಂದ ಹತರಾದರು. ಸರ್ವಶಕ್ತ ವಾಸುದೇವನು ತನ್ನ ಹೆಸರಿನಲ್ಲಿ ತನ್ನ ಆತ್ಮಶಕ್ತಿಯನ್ನು ತುಂಬಿದ್ದಾನೆ. ಸಕಲವೂ ಅವನಿಗೆ ಸಂಬಂಧಿಸಿದ್ದು; ಸಕಲವೂ ಅವನಲ್ಲಿಯೇ ಇದೆ. ಭೀತಿಯ ಮೂರ್ತರೂಪವೂ ಶ್ರೀಕೃಷ್ಣನ ನಾಮಕ್ಕೇ ಹೆದರುತ್ತದೆ ಎಂದು ಇಲ್ಲಿ ಹೇಳಲಾಗಿದೆ. ಶ್ರೀಕೃಷ್ಣನ ನಾಮವು ಕೃಷ್ಣನಿಗಿಂತ ಭಿನ್ನವಲ್ಲ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ಶ್ರೀಕೃಷ್ಣನ ಹೆಸರು ಶ್ರೀಕೃಷ್ಣನಷ್ಟೇ ಶಕ್ತಿಯುತವಾದದ್ದು. ಎರಡರಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಯಾರು ಬೇಕಾದರೂ, ಎಂತಹ ಘೋರ ಅಪಾಯ, ಆಪತ್ಕಾಲಗಳಲ್ಲೂ ಶ್ರೀಕೃಷ್ಣನ ದಿವ್ಯನಾಮವನ್ನು ಅಪ್ರಜ್ಞಾಪೂರ್ವಕವಾಗಿಯೋ ಅಥವಾ ಸಂದರ್ಭಿಕ ಒತ್ತಡಗಳಿಂದಾಗಿಯೋ ಉಚ್ಚರಿಸುವ ಮೂಲಕ ಜನನ ಮರಣಗಳ ಜಾಲದಿಂದ ಮುಕ್ತಿಪಡೆಯಬಹುದು.

No comments:

Post a Comment