Friday, 10 March 2017

ಶ್ರೀಮದ್ಭಾಗವತಮ್ , ಸ್ಕಂದ ೧. ಅಧ್ಯಾಯ -೧ : ಋಷಿಗಳ ಪ್ರಶ್ನೆ , ಶ್ಲೋಕ 1, ಭಾವಾರ್ಥ

  ಮಾಯಾವಾದಿ ವಿದ್ವಾಂಸರಾದ ಕೆಲವರು ಶ್ರೀಮದ್ಭಾಗವತವನ್ನು ಶ್ರೀ ವೇದವ್ಯಾಸರು ರಚಿಸಲಿಲ್ಲ, ಆಧುನಿಕ ಪರಂಪರೆಯ ವೋಪದೇವನೆಂಬವನು ರಚಿಸಿದನೆಂದು ಹೇಳುತ್ತಾರೆ. ಇಂತಹ ಅರ್ಥಹೀನ ತರ್ಕಗಳನ್ನು ಖಂಡಿಸಲೋಸ್ಕರ ಶ್ರೀ ಶ್ರೀಧರ ಸ್ವಾಮಿಗಳು ಪ್ರಾಚೀನ ಪುರಾಣಗಳಲ್ಲಿ ಶ್ರೀಮದ್ಭಾಗವತದ ಪ್ರಸ್ತಾಪವಿರುವುದನ್ನು ಬೆರಳು ಮಾಡಿ ತೋರಿಸುತ್ತಾರೆ. ಭಾಗವತದ ಮೊದಲನೆಯ ಶ್ಲೋಕವು ಗಾಯತ್ರೀ ಮಂತ್ರದಿಂದ ಪ್ರಾರಂಭವಾಗುತ್ತದೆ. ಪುರಾಣಗಳಲ್ಲೇ ಅತಿ ಪ್ರಾಚೀನ ಪುರಾಣವಾದ ಮತ್ಸ್ಯಪುರಾಣದಲ್ಲಿ ಇದರ ಪ್ರಸ್ತಾಪವಿದೆ. ಭಾಗವತದಲ್ಲಿ ಪ್ರಸ್ತಾಪವಿರುವ ಗಾಯತ್ರೀಮಂತ್ರದೊಂದಿಗೆ ಅನೇಕಾನೇಕ ಆಧ್ಯಾತ್ಮಿಕ ಉಪದೇಶಗಳಿವೆಯೆಂದು ಮತ್ಸ್ಯ ಪುರಾಣದಲ್ಲಿ ಹೇಳಲಾಗಿದೆ. ಜೊತೆಗೆ ವೃತ್ರಾಸುರ ಚರಿತೆಯೂ ಇದೆ. ಹುಣ್ಣಿಮೆಯ ದಿನ ಈ ಮಹಾಗ್ರಂಥವನ್ನು ದಾನಕೊಟ್ಟವರು ದೇವೋತ್ತಮ ಪರಮ ಪುರುಷನಲ್ಲಿಗೆ ಮರಳಿ, ಜೀವನದಲ್ಲಿ ಪರಮಸಿದ್ಧಿಯನ್ನು ಗಳಿಸುವರು. ಶ್ರೀಮದ್ಭಾಗವತದ ಬಗ್ಗೆ ಉಳಿದ ಪುರಾಣಗಳಲ್ಲೂ ಪ್ರಸ್ತಾಪಿಸಿದ್ದು ಹದಿನೆಂಟು ಸಾವಿರ ಶ್ಲೋಕಗಳನ್ನೊಳಗೊಂಡಿರುವ ಈ ಮಹಾ ಗ್ರಂಥವನ್ನು ಹನ್ನೆರಡು ಸ್ಕಂದಗಳಲ್ಲಿ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಪದ್ಮಪುರಾಣದಲ್ಲೂ ಗೌತಮ ಮತ್ತು ಅಂಬರೀಷರ ನಡುವಣ ಸಂಭಾಷಣೆಯಲ್ಲೂ ಭಾಗವತದ ಉಲ್ಲೇಖವಿದೆ. ಲೌಕಿಕ ಬಂಧನಗಳಿಂದ ಮುಕ್ತಿಯನ್ನು ಅಪೇಕ್ಷಿಸುವುದಾದಲ್ಲಿ ಶ್ರೀಮದ್ಭಾಗವತವನ್ನು ತಪ್ಪದೇ ಸತತವಾಗಿ ಪಠಿಸುವಂತೆ ಮಹಾರಾಜರಿಗೆ ಉಪದೇಶಿಸಲಾಯಿತು. ಹೀಗಿರುವಾಗ, ಭಾಗವತದ ಪಾರಮ್ಯದ ಬಗ್ಗೆ ಸಂದೇಹವೇ ಇಲ್ಲ. ಕಳೆದ ಐದುನೂರು ವರ್ಷಗಳಲ್ಲಿ ಜೀವಗೋಸ್ವಾಮಿ, ವಿಶ್ವನಾಥ ಚಕ್ರವರ್ತಿ, ವಲ್ಲಭಾಚಾರ್ಯರಂತಹ ಪ್ರಕಾಂಡ ಪಂಡಿತರು ಮತ್ತು ಆಚಾರ್ಯರೇ ಅಲ್ಲದೆ ಮಹಾಪ್ರಭು ಚೈತನ್ಯರ ತರುವಾಯ ಅನೇಕ ಮಂದಿ ಅದ್ವಿತೀಯ ವಿಧ್ವಾಂಸರು ಶ್ರೀಮದ್ಭಾಗವತಕ್ಕೆ ವಿಸ್ತಾರವಾದ ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಭಾಗವತದ ಗಂಭೀರ ಅಧ್ಯಾಯನದಲ್ಲಿ ಆಸಕ್ತಿಯುಳ್ಳವರು ಅದರ ಅಲೌಕಿಕ ಸಂದೇಶಗಳನ್ನು ಅರ್ಥಮಾಡಿಕೊಂಡು ಆಸ್ವಾದಿಸಲು ಈ ವ್ಯಾಖ್ಯಾನಗಳನ್ನು ಓದುವುದು ಉತ್ತಮ.
       ಶ್ರೀ ವಿಶ್ವನಾಥ ಚಕ್ರವರ್ತಿ ಠಾಕೂರರು ಐಹಿಕ ಉನ್ಮಾದಗಳಿಂದ ಮುಕ್ತವಾದ ಪರಿಶುದ್ಧ ಲೈಂಗಿಕ ಮನಃಶಾಸ್ತ್ರ (ಆದಿರಸ) ಕುರಿತು ವಿವೇಚಿಸಿದ್ದಾರೆ. ಇಡೀ ಭೌತಿಕ ಸೃಷ್ಟಿಯು ಲೈಂಗಿಕ ಜೀವನದ ತತ್ವಾಧಾರದ ಮೇಲೆ ಚಲಿಸುತ್ತಿದೆ. ಆಧುನಿಕ ನಾಗರಿಕತೆಯಲ್ಲಂತೂ ಕಾಮಜೀವನ ಎಲ್ಲಾ ಚಟುವಟಿಕೆಗಳ ಕೇಂದ್ರಬಿಂದು. ಯಾರು ಎತ್ತಕಡೆ ಮುಖಮಾಡಿದರೂ ಪ್ರಧಾನವಾಗಿ ಕಾಣುವುದು ಲೈಂಗಿಕ ಜೀವನ. ಆದ್ದರಿಂದಲೇ ಲೈಂಗಿಕ ಜೀವನ ಅವಾಸ್ತವವಲ್ಲ. ಅದರ ವಾಸ್ತವಿಕತೆಯನ್ನು ಆಧ್ಯಾತ್ಮಿಕ ಲೋಕದಲ್ಲಿ ಅನುಭವಿಸಬಹುದು. ಲೌಕಿಕದ ಲೈಂಗಿಕ ಜೀವನವು ಮೂಲ ಸತ್ಯದ ವಿಕೃತ ಛಾಯೆ. ಲೈಂಗಿಕ ಜೀವನದ ಮೂಲ ಸತ್ಯವು ಪರಮಸತ್ಯದಲ್ಲಿ ಅಡಗಿದೆ. ಆದ್ದರಿಂದಲೇ ಪರಮ ಸತ್ಯವು ನಿರಾಕಾರವಾಗಿರಲಾರದು. ನಿರಾಕಾರವಾಗಿದ್ದೂ ಪರಿಶುದ್ಧ ಲೈಂಗಿಕ ಜೀವನ ಅಸಾಧ್ಯ. ಇದರ ಪರಿಣಾಮವಾಗಿಯೇ ನಿರಾಕಾರವಾದಿ ದಾರ್ಶನಿಕರು ಹೇಯವಾದ ಐಹಿಕ ಕಾಮಜೀವನಕ್ಕೆ ಪರೋಕ್ಷ ಪ್ರಚೋದನೆ ನೀಡಿದ್ದಾರೆ. ಅವರು ಅಂತಿಮ ಸತ್ಯವಾದ ನಿರಾಕಾರವಾದಕ್ಕೆ ಹೆಚ್ಚು ಪ್ರಾಮುಖ್ಯ ನೀಡಿರುವುದೇ ಇದಕ್ಕೆ ಕಾರಣ. ಇದೆಲ್ಲದರ ಪರಿಣಾಮವಾಗಿ ಕಾಮದ ಯಥಾರ್ಥ ಆಧ್ಯಾತ್ಮಿಕ ರೂಪವನ್ನು ತಿಳಿಯದ ಮಾನವನು ಲೌಕಿಕದ ವಿಕೃತ ಕಾಮ ಜೀವನವೇ ಸರ್ವಸ್ವ ಎಂದು ಅಂಗೀಕರಿಸಿದ್ದಾನೆ. ವ್ಯಾಧಿಗ್ರಸ್ಥ ಲೌಕಿಕ ಪರಿಸರದ ಲೈಂಗಿಕ ಜೀವನ ಹಾಗೂ ಆಧ್ಯಾತ್ಮಿಕ ಲೈಂಗಿಕ ಜೀವನ ಇವೆರಡರಲ್ಲಿ ವ್ಯತ್ಯಾಸಗಳಿವೆ.
       ಶ್ರೀಮದ್ಭಾಗವತವು ಕ್ರಮೇಣ ನಿಷ್ಪಕ್ಷಪಾತ ವಾಚಕನನ್ನು ಪರಮಾರ್ಥದ ಪರಿಪೂರ್ಣ ಸಿದ್ಧಿಯ ಶೃಂಗಕ್ಕೆ ಏರಿಸುತ್ತದೆ. ಅದು ವೇದಮಂತ್ರಗಳಲ್ಲಿ ಒತ್ತಿಹೇಳಲಾಗಿರುವ ಫಲಾಪೇಕ್ಷಿತ ಕರ್ಮಗಳನ್ನು, ಊಹಾತ್ಮಕ ತತ್ವಜ್ಞಾನವನ್ನು ಹಾಗೂ ಔಪಚಾರಿಕ ದೇವತಾರಾಧನೆಯಂತಹ ಮೂರು ವಿಧದ ಐಹಿಕ ಕ್ರಿಯಾ ಚಟುವಟಿಕೆಗಳನ್ನು ಮೀರಿ ನಿಲ್ಲುವ ಸಾಮರ್ಥ್ಯವನ್ನು ವಾಚಕರಿಗೆ ನೀಡುತ್ತದೆ.

No comments:

Post a Comment