Tuesday, 23 May 2017

ಅಧ್ಯಾಯ-೩: ಸಕಲಾವತಾರಗಳಿಗೆ ಆದಿಮೂಲನಾದ ಕೃಷ್ಣ…ಭಗವಾನ್ ಬುದ್ಧನ ಅವತಾರಕ್ಕೆ ಮುಂಚೆ ಪ್ರಾಣಿಗಳನ್ನು ಬಲಿಕೊಡುವುದು, ಸಮಾಜದ ಅತ್ಯಂತ ಪ್ರಧಾನ ಲಕ್ಷಣವಾಗಿತ್ತು. ಇಂತಹ ಪಾಣಿಹತ್ಯೆಯನ್ನು ಜನರು ವೈದಿಕಯಜ್ಞಗಳೆಂದು ಸಮರ್ಥಿಸುತ್ತಿದ್ದರು. ಅಧಿಕೃತ ಗುರುಶಿಷ್ಯ ಪರಂಪರೆಯ ಮೂಲಕ ವೇದಾಧ್ಯಯನ ಮಾಡದಿರುವ ಸಂದಭರ್ದಲ್ಲಿ ವೇದಗಳ ಸಾಮಾನ್ಯ ಓದುಗರು ಅದರ ಅಲಂಕಾರಿಕ ಭಾಷೆಯಿಂದ ದಾರಿತಪ್ಪುತ್ತಾರೆ. ಭಗವದ್ಗೀತೆಯಲ್ಲಿ ಅಂತಹ ಮೂರ್ಖವಿದ್ವಾಂಸರ ಬಗ್ಗೆ (ಅವಿಪಶ್ಚಿತಃ) ಟೀಕೆಯನ್ನು ಮಾಡಲಾಗಿದೆ. ವೇದ ಸಾಹಿತ್ಯದ ಮೂರ್ಖ ಪಂಡಿತರು ಆಧ್ಯಾತ್ಮಿಕ ಸಂದೇಶವನ್ನು ಗುರು ಪರಂಪರೆಯ ಆಧ್ಯಾತ್ಮಿಕ ಸಾಕ್ಷಾತ್ಕಾರದ ಮೂಲಗಳಿಂದ ಗ್ರಹಿಸಲು ಎಚ್ಚರವಹಿಸದಿದ್ದರೆ, ನಿಶ್ಚಯವಾಗಿಯೂ ಅವರು ದಾರಿತಪ್ಪುತ್ತಾರೆ. ಅಂತಹವರಿಗೆ ವಿಧ್ಯುಕ್ತ ಆಚರಣೆಗಳೇ ಸರ್ವಸ್ವವೆನಿಸುತ್ತವೆ. ಅವರಿಗೆ ಆಳವಾದ ಜ್ಞಾನವಿರುವುದಿಲ್ಲ. ಭಗವದ್ಗೀತೆಯ (೧೫.೧೫) ಪ್ರಕಾರ ವೇದೈಶ್ಚಸರ್ವೈರಹಮೇವ ವೇದ್ಯ - ವೇದಗಳ ಇಡೀ ವ್ಯವಸ್ಥೆಗಳ ಉದ್ದೇಶ ದೇವೋತ್ತಮ ಪರಮ ಪುರುಷನ ಕಡೆಗೆ ಒಬ್ಬ ವ್ಯಕ್ತಿಯನ್ನು ಕ್ರಮವಾಗಿ ಕರೆದೊಯ್ಯುವುದು. ವೇದ ಸಾಹಿತ್ಯದ ಪ್ರಧಾನ ವಸ್ತು ಧ್ಯೇಯವೇ ದೇವೋತ್ತಮ ಪರಮ ಪುರುಷ. ಜೀವಾತ್ಮ, ಐಹಿಕ ಜಗತ್ತು ಇವುಗಳನ್ನು ಮತ್ತು ಇವುಗಳ ಅಂತಃಸಂಬಂಧವನ್ನು ಅರ್ಥಮಾಡಿಕೊಳ್ಳುವುದು. ಅಂತಹ ಸಂಬಂಧವನ್ನು ಗ್ರಹಿಸಿದ ಮೇಲೆ ಆ ಸಂಬಂಧದ ಚಟುವಟಿಕೆ ಪ್ರಾರಂಭವಾಗುತ್ತದೆ.  ಆ ಪ್ರಕ್ರಿಯೆಯ ಪರಿಣಾಮವಾಗಿ ದೇವೋತ್ತಮ ಪರಮ ಪುರುಷನನ್ನು ಮತ್ತೆ ಸೇರುವ ಜೀವನದ ಪರಮೋದ್ದೇಶ ಸರಳವಾಗಿ ಈಡೇರುತ್ತದೆ. ದುರದೃಷ್ಟವಶಾತ್ ಅನಧಿಕೃತ ವೈದಿಕ ವಿದ್ವಾಂಸರು ಶುದ್ಧೀಕರಣ ಆಚರಣವಿಧಿಗಳಿಗೆ ಕಟ್ಟುಬೀಳುತ್ತಾರೆ. ಇದರಿಂದಾಗಿ ಅವರ ಸಹಜವಾದ ಉದ್ಧಾರಮಾರ್ಗಕ್ಕೆ ತಡೆ ಉಂಟಾಗುತ್ತದೆ.
ದಾರಿ ತಪ್ಪಿದ ನಾಸ್ತಿಕ ಪ್ರವೃತ್ತಿಯ ವ್ಯಕ್ತಿಗಳಿಗೆ ಭಗವಾನ್ ಬುದ್ಧನು ಈಶ್ವರತತ್ವದ ಮೂರ್ತರೂಪ. ಆದುದರಿಂದ ಬುದ್ಧನು ಪ್ರಾಣಿಹತ್ಯೆಯ ಅಭ್ಯಾಸವನ್ನು ಮೊದಲು ಪ್ರತಿಬಂಧಿಸಬೇಕೆಂದು ಅಪೇಕ್ಷಿಸಿದನು. ಭಗವದ್ಧಾಮಕ್ಕೆ ಮರಳುವ ಮಾರ್ಗದಲ್ಲಿ ಪ್ರಾಣಿಹಂತಕರು ಅಪಾಯಕಾರೀ ಅಡಚಣೆಗಳಾಗಿದ್ದಾರೆ. ಪ್ರಾಣಿಹಂತಕರಲ್ಲಿ ಎರಡು ಬಗೆಯವರಿದ್ದಾರೆ. ಆತ್ಮವನ್ನೂ ಕೆಲವು ಬಾರಿ ಪ್ರಾಣಿ ಅಥವಾ ಜೀವಿ ಎಂದು ಕರೆಯಲಾಗುತ್ತದೆ. ಆದುದರಿಂದ ಪ್ರಾಣಿಗಳನ್ನು ಕೊಲ್ಲುವವರು ಮತ್ತು ಆತ್ಮದ ಅಸ್ತಿತ್ವವನ್ನು ಕಳೆದುಕೊಂಡವರು ಇಬ್ಬರೂ ಪಶುಘಾತಕರೇ. ದೇವೋತ್ತಮ ಪರಮ ಪುರುಷನ ಆಧ್ಯಾತ್ಮಿಕ ಸಂದೇಶವು ಕೇವಲ ಪಶು ಘಾತಕರಿಗೆ ಮಾತ್ರ ರುಚಿಸಲಾರದು ಎಂಬುದಾಗಿ ಪರೀಕ್ಷಿತ ಮಹರಾಜನು ಹೇಳಿದ್ದಾನೆ. ಆದುದರಿಂದ ಜನಗಳನ್ನು ದೇವೋತ್ತಮ ಪರಮ ಪುರುಷನ ಮಾರ್ಗದಲ್ಲಿ ಕೊಂಡೊಯ್ಯಬೇಕೆಂದರೆ, ಅವರಿಗೆ ಮೊಟ್ಟಮೊದಲು ಪ್ರಾಣಿಹತ್ಯೆಯ ಅಭ್ಯಾಸವನ್ನು ಕೈಬಿಡುವಂತೆ ಬೋಧಿಸಬೇಕು. ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕೂ ಪ್ರಾಣಿಹತ್ಯೆಗೂ ಯಾವುದೇ ರೀತಿಯ ಸಂಬಂಧವಿಲ್ಲವೆಂದು ಹೇಳುವುದು ಪರಮ ಮೂರ್ಖತನ. ಪ್ರಾಣಿಹತ್ಯೆ ಮತ್ತು  ಆಧ್ಯಾತ್ಮಿಕ ಸಾಕ್ಷಾತ್ಕಾರ ಇವು ಪರಸ್ಪರ ಸಂಬಂಧವಿಲ್ಲದವು ಎಂಬ ಅಪಾಯಕಾರೀ ಸಿದ್ಧಾಂತವೇ ಕಾರಣವಾಗಿ, ಅನೇಕ ಹುಸಿ ಸನ್ಯಾಸಿಗಳು ಕಲಿಯುಗದ ಪ್ರಭಾವದಿಂದ ಉದ್ಭವಿಸಿ, ವೇದಗಳ ಮುಸುಕಿನಲ್ಲಿ ಪ್ರಾಣಿಹತ್ಯೆಯನ್ನು ಬೋಧಿಸುತ್ತಿದ್ದಾರೆ. ಚೈತನ್ಯ ಮಹಾಪ್ರಭುಗಳು ಮತ್ತು ಮೌಲಾನಾ ಚಾಂದ್ ಕಾಜಿಸಾಹೇಬ್ ಇವರ ನಡುವೆ ನಡೆದ ಸಂವಾದದಲ್ಲಿ ಈ ವಿಷಯ ಈಗಾಗಲೇ ಚರ್ಚಿತವಾಗಿದೆ. ವೇದಗಳಲ್ಲಿ ಹೇಳಲಾಗಿರುವ ಪಶುಬಲಿಯು ಕಸಾಯಿಖಾನೆಯ ನಿರಂಕುಶಪ್ರಾಣಿಹತ್ಯೆಯಿಂದ ಭಿನ್ನವಾದುದು. ವೈದಿಕ ವಿದ್ವಾಂಸರೆಂದು ಕರೆಸಿಕೊಂಡವರು ಅಥವಾ ಅಸುರರು ವೇದಗಳಲ್ಲಿ ಪ್ರಾಣಿಹತ್ಯೆಯ ದೃಷ್ಟಾಂತಗಳನ್ನು ಎತ್ತಿಹಿಡಿದರು. ಆದಕಾರಣವೇ ಭಗವಾನ್ ಬುದ್ಧನು ಮೇಲ್ನೋಟಕ್ಕೆ ವೇದಗಳ ಸಾರ್ವಭೌಮತ್ವವನ್ನು ತಿರಸ್ಕರಿಸಿದನು. ಜನಗಳನ್ನು ಪ್ರಾಣಿಹತ್ಯೆಯ ಅಭ್ಯಾಸದಿಂದ ಪಾರುಮಾಡಲು ಮತ್ತು ಬಡಪಾಯಿ ಪ್ರಾಣಿಗಳು ಹತ್ಯೆಯಾಗದಂತೆ ಕಾಪಾಡಲು ಭಗವಾನ್ ಬುದ್ಧನು ವೇದಗಳನ್ನು ತಿರಸ್ಕರಿಸಿದನು. ಜಾಗತಿಕ ಭ್ರಾತೃತ್ವ, ಶಾಂತಿ, ನ್ಯಾಯ ಮತ್ತು ಸಮಾನತೆಯ ಮಾತನಾಡುತ್ತಲೇ ಜನರು ತಮ್ಮ ಸೋದರ ಜೀವಿಗಳಾದ ಪ್ರಾಣಿಗಳ ಹತ್ಯೆಯಲ್ಲಿ ತೊಡಗುತ್ತಾರೆ. ಪ್ರಾಣಿಗಳ ಹತ್ಯೆ ನಡೆಯುತ್ತಿರುವಾಗ ನ್ಯಾಯ ಎಂಬುದು ಸಾಧ್ಯವಿಲ್ಲ. ಆದುದರಿಂದಲೇ ಭಗವಾನ್ ಬುದ್ಧನು ಪ್ರಾಣಿಹತ್ಯೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಅಪೇಕ್ಷೆಪಟ್ಟನು. ಹೀಗೆ ಮಾಡಿದ್ದರಿಂದ ಆತನ ಅಹಿಂಸಾತತ್ವವು ಕೇವಲ ಭಾರತದಲ್ಲಿ ಮಾತ್ರವಲ್ಲ, ಹೊರದೇಶದಲ್ಲೂ ಪ್ರಚಾರಪಡೆಯಿತು. 

Monday, 22 May 2017

ಶ್ರೀಮದ್ಭಾಗವತಮ್ ೧.೩.೨೩


ಅಧ್ಯಾಯ-೩: ಸಕಲಾವತಾರಗಳಿಗೆ ಆದಿಮೂಲನಾದ ಕೃಷ್ಣ…

ಶ್ರೀಮದ್ಭಾಗವತಮ್ ೧.೩.೨೩: ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಅವತಾರಗಳಲ್ಲಿ ಭಗವಂತನು ಬಲರಾಮ ಮತ್ತು ಕೃಷ್ಣನಾಗಿ, ಸ್ವಯಂ ತಾನೇ ವೃಷ್ಣಿ(ಯಾದವ) ವಂಶದಲ್ಲಿ ಜನಿಸಿದನು ಮತ್ತು ಭೂಭಾರವನ್ನು ನಿವಾರಿಸಿದನು.

ಭಾವಾರ್ಥ: ಈ ಶ್ಲೋಕದಲ್ಲಿ ಭಗವಾನ್ ಎಂಬ ಪದವನ್ನು ನಿರ್ದಿಷ್ಟವಾಗಿ ಬಳಸಿರುವುದು ಬಾಲರಾಮ ಮತ್ತು ಕೃಷ್ಣರು ಭಗವಂತನ ಮೂಲ ರೂಪಗಳು ಎಂಬುದನ್ನು ಸೂಚಿಸುತ್ತದೆ. ಮುಂದೆ ಇದನ್ನು ಇನ್ನಷ್ಟು ವಿವರಿಸಲಾಗುವುದು. ಈ ಪ್ರಕರಣದ ಪ್ರಾರಂಭದಲ್ಲೇ ನಾವು ಗಮನಿಸಿದಂತೆ, ಕೃಷ್ಣನು ಪುರುಷನ ಅವತಾರವಲ್ಲ. ಅವನು ಮೂಲ ದೇವೋತ್ತಮ ಪುರುಷ ಮತ್ತು ಬಲರಾಮನು ಭಗವಂತನ ಮೊದಲ ಸ್ವಾಂಶ ಅಭಿವ್ಯಕ್ತಿ. ಬಲದೇವನಿಂದ ಸ್ವಾಂಶ ವಿಸ್ತರಣೆಯ ಮೊದಲ ಚತುರ್ವ್ಯೆಹವಾದ ವಾಸುದೇವ, ಸಂಕರ್ಷಣ, ಅನಿರುದ್ಧ ಮತ್ತು ಪ್ರದ್ಯುಮ್ನರು ವಿಸ್ತರಣೆಗೊಳ್ಳುತ್ತಾರೆ. ಭಗವಂತ ಶ್ರೀಕೃಷ್ಣನೇ ವಾಸುದೇವ, ಬಲರಾಮನೇ ಸಂಕರ್ಷಣ.

ಶ್ರೀಮದ್ಭಾಗವತಮ್ ೧.೩.೨೪: ಆಮೇಲೆ ಕಲಿಯುದ ಪ್ರಾರಂಭದಲ್ಲಿ ಭಗವಂತನು ಗಯಾ ಪ್ರಾಂತ್ಯದಲ್ಲಿ, ಅಂಜನಳ ಮಗನಾಗಿ, ಭಗವಾನ್ ಬುದ್ಧನಾಗಿ ಅವತರಿಸುತ್ತಾನೆ. ಶ್ರದ್ಧಾವಂತ ದೈವಭಕ್ತರ ದ್ವೇಷಿಗಳನ್ನು ಮಾರ್ಗಚ್ಯುತರನ್ನಾಗಿ ಮಾಡುವುದೇ ಭೌದ್ಧಾವತಾರದ ಉದ್ದೇಶ.

ಭಾವಾರ್ಥ: ದೇವೋತ್ತಮ ಪರಮ ಪುರುಷನ ಶಕ್ತಿಪೂರ್ಣವಾದ ಅವತಾರವೇ ಭಗವಾನ್ ಬುದ್ಧನ ಅವತಾರ. ಬುದ್ಧನು ಗಯಾ ಪ್ರಾಂತ್ಯದಲ್ಲಿ (ಬಿಹಾರ) ಅಂಜನಾಳ ಮಗನಾಗಿ ಹುಟ್ಟಿದನು ಮತ್ತು ಅವನು ತನ್ನದೇ ಆದ ಅಹಿಂಸಾತತ್ವವನ್ನು ಬೋಧಿಸಿದನು. ವೇದ ಸಮ್ಮತವಾದ ಪ್ರಾಣಿಬಲಿಗಳನ್ನು ಕೂಡಾ ಅವನು ನಿಷೇಧಿಸಿದನು. ಭಗವಾನ್ ಬುದ್ಧನು ಅವತರಿಸಿದ ಸಮಯದಲ್ಲಿ ಜನಸಾಮಾನ್ಯರು ನಾಸ್ತಿಕರಾಗಿದ್ದರು. ಬೇರೆ ಎಲ್ಲದಕ್ಕಿಂತ ಪ್ರಾಣಿಮಾಂಸ ಅವರಿಗೆ ಮುಖ್ಯವಾಗಿತ್ತು. ವೈದಿಕ ಯಜ್ಞಗಳ ನೆಪದಲ್ಲಿ ಪ್ರತಿಯೊಂದು ಸ್ಥಳವು ವಾಸ್ತವವಾಗಿ ಕಟುಕರ ಮನೆಯಾಗಿ ಹೋಗಿತ್ತು. ಯಾವುದೇ ನಿಯಂತ್ರಣವಿಲ್ಲದೆ ಪ್ರಾಣಿಹತ್ಯೆಯಲ್ಲಿ ಜನರು ತೊಡಗಿದ್ದರು. ಬಡಪಶುಗಳ ಮೇಲೆ ದಯೆ ತಾಳಿ ಭಗವಾನ್ ಬುದ್ಧನು ಅಹಿಂಸಾತತ್ವವನ್ನು ಬೋಧಿಸಿದನು. ತಾನು ವೇದ ತತ್ವಗಳನ್ನು  ನಂಬುವುದಿಲ್ಲವೆಂದು ಹೇಳಿದನು. ಪ್ರಾಣಿಬಲಿಯಿಂದ ಉಂಟಾಗುವ ಮನೋವೈಜ್ಞಾನಿಕವಾದ ವಿರುದ್ಧ ಪರಿಣಾಮಗಳ ಬಗ್ಗೆ ಅವನು ಒತ್ತುಕೊಟ್ಟು ಮಾತಾಡಿದನು. ಭಗವಂತನಲ್ಲಿ ಶ್ರದ್ಧೆಯಿಲ್ಲದ ಕಲಿಯುಗದ ಅಲ್ಪಜ್ಞಾನಿಗಳು ಬುದ್ಧನ ತತ್ವವನ್ನು ಅನುಸರಿಸಿದರು. ಅಹಿಂಸೆ ಮತ್ತು ನೈತಿಕಶಿಸ್ತುಗಳ ಬಗ್ಗೆ ಅವರು ತತ್ಕಾಲದಲ್ಲಿ  ಶಿಕ್ಷಣ ಪಡೆದರು. ದೈವಸಾಕ್ಷಾತ್ಕಾರದ ದಾರಿಯಲ್ಲಿ ಮುನ್ನಡೆಯಲು ಇವೇ ಆರಂಭದ ಹೆಜ್ಜೆಗಳು. ಬುದ್ಧನು ನಾಸ್ತಿಕರನ್ನು ಉದ್ದೇಶಪೂರ್ವಕವಾಗಿಯೇ  ಮಾರ್ಗಚ್ಯುತರನ್ನಾಗಿ ಮಾಡಿದನು. ಬುದ್ಧನ ತತ್ವಗಳನ್ನು ಅನುಸರಿಸಿದ ಅಂತಹ ನಾಸ್ತಿಕರು ದೇವರಲ್ಲಿ ನಂಬಿಕೆ ಉಳ್ಳವರಾಗಿರಲಿಲ್ಲ. ಆದರೆ ಭಗವಾನ್ ಬುದ್ಧನಲ್ಲಿ ಮಾತ್ರ ಅವರಿಗೆ ಪರಿಪೂರ್ಣವಾದ ಶ್ರದ್ಧೆಯಿತ್ತು. ಆ ಬುದ್ಧನಾದರೋ, ಭಗವಂತನ ಅವತಾರವೇ ಆಗಿದ್ದನು. ಹೀಗಾಗಿ ದೇವರಲ್ಲಿ ನಂಬಿಕೆಯಿಲ್ಲದ ಜನರನ್ನು ಬುದ್ಧನ ರೂಪದಲ್ಲಿದ್ದ ದೇವರನ್ನು ನಂಬುವಂತೆ ಮಾಡಲಾಯಿತು. ಅದೇ ಬುದ್ಧನ ದಯೆ. ಅವನು ದೈವಶ್ರದ್ಧೆ ಇಲ್ಲದವರನ್ನು ತನ್ನಲ್ಲಿ ಶ್ರದ್ಧೆಹೊಂದುವಂತೆ ಮಾಡಿದನು.

ಪ್ರಭುಪಾದರ ವಾಣಿ